ಡಿಮೀಟ್ರಿಯಸ್ 1

ಶೈಲಿಯನ್ನು ಕುರಿತ ಪ್ರಾಚೀನ ಗ್ರೀಕ್ ಗ್ರಂಥವೊಂದರ ಕರ್ತೃ. ಅದಕ್ಕೆ ಶೈಲಿಯನ್ನು ಕುರಿತು-ಎಂಬ ಹೆಸರನ್ನು ಇಟ್ಟಿದ್ದಾರೆ. ಗ್ರೀಕ್ ಅಂಕಿತದ ದಿಟವಾದ ಭಾಷಾಂತರ "ವ್ಯಾಖ್ಯಾನದ ವಿಚಾರ" ಎಂದು ಕೆಲವು ತಜ್ಞರ ಮತ. ಶೈಲಿಯ ಬದಲು ರೀತಿ ಹೆಚ್ಚು ಉಚಿತವೆಂದು ಇನ್ನು ಕೆಲವರ ಸೂಚನೆ. ಅಂತೂ ಅಲಂಕಾರಶಾಸ್ತ್ರಕ್ಕೆ (ರ್ಹೆಟೊರಿಕ್) ಸೇರಿದ ಈ ಗ್ರಂಥ ಬಹಳ ಉಪಯುಕ್ತವಾದ್ದು. ಅದನ್ನು ಬರೆದವನಾರು, ಎಲ್ಲಿದ್ದ, ಯಾವ ಕಾಲದವ, ಅವನ ಜೀವಿತದ ವಿವರಗಳೇನು-ಇತ್ಯಾದಿ ಪ್ರಶ್ನೆಗೆ ಖಚಿತವಾದ ಉತ್ತರ ದೊರೆತಿಲ್ಲ. ಪ್ರಾಯಶಃ ದೊರೆಯಲಾರದು. ಅದರ ಕರ್ತೃವೆನ್ನಲಾದ ಡಿಮೀಟ್ರಿಯಸ್ಸನ ಕಾಲವನ್ನು ಕ್ರಿ.ಪೂ. 4ನೆಯ ಶತಮಾನದಿಂದ ಕ್ರಿ.ಶ. 1ನೆಯ ಶತಮಾನದವರೆಗೂ ಎಳೆದು ತಂದಿದ್ದಾರೆ. ಬಹುಶಃ ಕ್ರಿ.ಪೂ 3ನೆಯ ಶತಮಾನ ಸರಿಯೆಂದು ಒಪ್ಪಿದರೆ ತಪ್ಪಾಗಲಾರದು. ಅಷ್ಟೆ; ಮಿಕ್ಕ ಯಾವ ವಿಚಾರವೂ ಅವನ ಬಗೆಗೆ ತಿಳಿಯದು. ಪ್ರೊ. ಸೇಂಟ್ಸ್‍ಬೆರಿ ಅವನನ್ನು ಅನಿಶ್ಚಿತ ಡಿಮೀಟ್ರಿಯಸ್ ಎಂದು ಕರೆದಿದ್ದಾನೆ. 

	ಕ್ರಮಸಂಖ್ಯೆಯುಳ್ಳ ಕೇವಲ 304 ಚಿಕ್ಕ ಪ್ಯಾರಾಗಳು ಈ ಗ್ರಂಥದ ವಿಸ್ತಾರ. ಪ್ಯಾರಗಳ ಯೋಜನೆ ಸ್ಪಷ್ಟವೂ ವಿವೇಚಿತವೂ ಆಗಿದೆ. ಪೀಠಿಕಾಭಾಗ (1-35) ನಾಲ್ಕು ರೀತಿಗಳ ವಿವರಣೆ : ಭವ್ಯತೆಯ ಅಥವಾ ಮಹತ್ತ್ವದ ರೀತಿ (38-113); ನಯನಾಜೂಕು ರೀತಿಯ ವಿವರಣೆ (128-185); ಸರಳರೀತಿಯ ವಿವರಣೆ (190-237); ಶಕ್ತರೀತಿಯ ವಿವರಣೆ (241-304). ವಿವರಣೆಯಲ್ಲಿ ವಿಷಯಕ್ಕೆ ಸಂಬಂಧಿಸಿದ ಅಂಶ ಬಲು ಕಡಿಮೆ, ಶಬ್ದಗಳಿಗೂ ಶಬ್ದಗಳ ಅಳವಡಿಕೆಗೂ ಹೆಚ್ಚು ಗಮನ ಕೊಡಲಾಗಿದೆ. ಪ್ರತಿಯೊಂದು ರೀತಿಯೂ ಹೇಗೆ ಗುಣವಾಗುತ್ತದೆ, ಹೇಗೆ ಅವಗುಣವಾಗುತ್ತದೆ ಎಂಬುದನ್ನು ನಿಷ್ಠೆಯಿಂದ ತೋರಿಸಿದೆ. ಮಹತ್ತ್ವ ಜಡತೆಗೆ ಇಳಿಯಬಹುದು, ನಯನಾಜೂಕು ಸೋಗಿನ ಒಯ್ಯಾರವಾಗಬಹುದು, ಸರಳತೆ ಒಣಕಲಾಗಬಹುದು, ಶಕ್ತಿ ಒರಟಿಗೆ ಇಳಿಯಬಹುದು. ಪ್ರತಿಯೊಂದು ರೀತಿಗೂ ಅದರ ಗುಣ ಅಪೇಕ್ಷ್ಯ, ಅವಗುಣ ಅಪಾಯಕಾರಿ. ಅವಗುಣಗಳ ವಿವರ ಸಂಕ್ಷಿಪ್ತವಾಗಿದೆ. 

	ಅರಿಸ್ಟಾಟಲನ ಅಲಂಕಾರಶಾಸ್ತ್ರವೇ ಡಿಮೀಟ್ರಿಯಸ್ಸಿಗೆ ಮೂಲ ಆಧಾರ. ಆದರೂ ಅದನ್ನು ತನ್ನ ಇಷ್ಟದಂತೆ ಉಪಯೋಗಿಸಿಕೊಳ್ಳುವ ಹಕ್ಕು ತನ್ನದೆಂದು ಅವನು ನಂಬಿದ್ದ. ಅಲ್ಲಲ್ಲಿ ನಿರ್ದೇಶ್ಯವಾಕ್ಯವನ್ನು ಬದಲಾಯಿಸುತ್ತಾನೆ; ಸ್ವಂತ ಅಭಿಪ್ರಾಯವನ್ನು ಸೂಚಿಸುತ್ತಾನೆ; ಹೆಸರುಗಳ ಮಾರ್ಪಾಟೂ ಉಂಟು. ವಾಕ್ಯದ ಉಪವಾಕ್ಯಗಳು ಭಾವ ಭಾವನೆಯನ್ನು ಅನುಸರಿಸತಕ್ಕದ್ದು : ಯಾವೊಂದು ಅತಿ ಉದ್ದವಾಗಬಾರದು. ಸಂಕ್ಷಿಪ್ತತೆ ಬಲಿಷ್ಠವಾಗಬಲ್ಲುದು. ವಾಕ್ಯ ಬಂಧ ಎರಡು ಬಗೆ : ಕೊಡುಬಗೆ, ಸಡಿಲಬಗೆ : ಉಪವಾಕ್ಯಗಳು ಒತ್ತೊತ್ತಾಗಿ ಕೂಡಿಕೊಂಡದ್ದು ಕೂಡುವಾಕ್ಯ (ಪೀರಿಯಡ್) ಉಪವಾಕ್ಯಗಳ ಸಂಖ್ಯೆ ನಾಲ್ಕನ್ನು ಮೀರಬಾರದು. ಕೂಡುವಾಕ್ಯ ಗಂಭೀರ ಸರಣಿಗೆ ಬದಲು ಸಂಭಾಷಣಾ ಸರಣಿಯನ್ನು ಹಿಡಿದರೆ ಅದರ ಬಂಧ ಸಡಿಲಬಂಧಕ್ಕೆ ಸಮೀಪವಾಗುತ್ತದೆ. 

	ಪೀಠಿಕೆಯಾದ ಮೇಲೆ ಮುಖ್ಯ ವಿಷಯವನ್ನು ಎತ್ತಿಕೊಳ್ಳಲಾಗಿದೆ. ಇಲ್ಲಿ ಕ್ಯಾರೆಕ್ಟರ್ ಎಂಬುದರ ಸಮಂಜಸ ಭಾಷಾಂತರ ಶೈಲಿ (ಸ್ಟೈಲ್) ಅಲ್ಲ. ಏತಕ್ಕೆಂದರೆ ಮುಂದೆ ವಿಮರ್ಶೆಯಲ್ಲಿ ಶೈಲಿ ಎಂಬುದು ಮೂರು ಶೈಲಿಯ ಸೂತ್ರ ಎಂಬುದಕ್ಕೆ ಮಾತ್ರ ಹೊಂದಿಕೊಂಡಿತು. ಆದ್ದರಿಂದ ಇಲ್ಲಿ ಕ್ಯಾರೆಕ್ಟರ್ ಎಂದರೆ ವೈಲಕ್ಷಣ್ಯ ಅಥವಾ ಗುಣಲಕ್ಷಣ. ಪ್ಲೇಟೊವಿನ ಕಾಲದಿಂದ ಒಳವಸ್ತು (ಕಂಟೆಂಟ್) ಮತ್ತು ಆಕಾರಗಳ (ಫಾರಂ) ವಿಚಾರದಲ್ಲಿ ಮೊದಲನೆಯದು ಹೆಚ್ಚು ಜಿe್ಞÁಸೆಗೆ ಕಾರಣವಾಗಲಿಲ್ಲ; ಆದರೆ ಆಕಾರವನ್ನು ಕುರಿತು ಹಲವು ಅಭಿಪ್ರಾಯಗಳೂ ನಿರ್ದೇಶ್ಯಶಬ್ದಗಳೂ ಬಳಕೆಗೆ ಬಂದುವು. ಪ್ಲೇಟೋ ಸೂತ್ರಿಸಿದ ಶಬ್ದಗಳ ಆಯ್ಕೆ (ಲೆಕ್ಸಿಸ್) ಮತ್ತು ವಿನ್ಯಾಸ (ಸಿನ್ತೆಸಿಸ್) ಎರಡೂ ಬದಲಾಗಿ ನಿಂತುವು. ಡಿಮೀಟ್ರಿಯಸ್ ಅವುಗಳ ಅರ್ಥವನ್ನು ಹಿಗ್ಗಲಿಸಿದ. ಆಯ್ಕೆಯ ಕೆಳಗೆ ಚಾಲ್ತಿ ಶಬ್ದ, ಅಪೂರ್ವ ಶಬ್ದ, ನವೀನ ಶಬ್ದ, ಸಂಯುಕ್ತ ಪದ ಮುಂತಾದುವನ್ನೇ ಅಲ್ಲದೆ ಭಾವದ್ಯೋತಕ ಶಬ್ದ ಸ್ವಭಾವಸೂಚಕ ಶಬ್ದಗಳನ್ನೂ ಸೇರಿಸಿ, ಜೊತೆಗೆ ವಿಭಕ್ತಿ, ಕಾಲರೂಪ, ಭಾರಹೊತ್ತ ಶಬ್ದ, ಉಪಮಾನ ರೂಪಕಗಳನ್ನೂ ಪಟ್ಟಿ ಮಾಡಿದ; ಕೆಲವೇ ಪದ, ಅನೇಕ ಪದ ಎಂಬುದನ್ನೂ ಅಡಗಿಸಿದ. ವಿನ್ಯಾಸಕ್ಕೆ ಸಂಬಂಧಿಸಿದ ಅಂಶ ಮೂರು ಎಂದ : ಪದಗಳನ್ನು ಮಗ್ಗುಲುಮಗ್ಗುಲಲ್ಲಿ ಇಟ್ಟಾಗ ಎದ್ದು ಬರುವ ದನಿ, ವಾಕ್ಯ ಉಪವಾಕ್ಯಗಳ ರಚನೆ, ಮತ್ತು ಲಯ, ಅಲಂಕಾರಗಳೂ ವಿನ್ಯಾಸದ ಭಾಗ. 

	ಅಲಂಕಾರಗಳ ವಿಷಯದಲ್ಲಿ ಅವನ ಹೇಳಿಕೆ ಸೂಕ್ತವಾಗಿದೆ. ಒಂದೇ ಅಲಂಕಾರ ಹಲವು ರೀತಿಗಳಲ್ಲಿ ಬರಬಹುದು; ಒಂದು ಕಡೆ ಅದು ನಾಜೂಕಾದರೆ ಇನ್ನೊಂದು ಕಡೆ ಬಲಿಷ್ಠ, ಮತ್ತೊಂದು ಕಡೆ ಪರಿಣಾಮಕರ. ಕವಯಿತ್ರಿ ಸ್ಯಾಪೊ ಶಕ್ತ ಉಪಮೆಯನ್ನು ಚಿತ್ತರಂಜಕವಾಗಿಸಬಲ್ಲಳು; ಇತರರಿಗೆ ಅಸಾಧ್ಯವಾದ್ದನ್ನು ಅವಳು ಅಂದವಾಗಿ ಸಾಧಿಸುತ್ತಾಳೆ. 

	ರೂಪಕಾಲಂಕಾರದ ಚರ್ಚೆಗೆ 13 ಪ್ಯಾರಾ ಕೊಡಲಾಗಿದೆ. ಸಾದೃಶ್ಯ ಅತಿ ದೂರದ್ದಾಗಿರಬಾರದು; ಚೈತನ್ಯಗೂಡಿರಬೇಕು, ಜಡವಾಗಿರಕೂಡದು, ರೂಪಕವನ್ನು ಅದಲುಬದಲಿಸುವುದು ಸಲ್ಲುವುದಿಲ್ಲ : ಬೆಟ್ಟದ ಪಾದ ಎನ್ನಬಹುದು, ಮನುಷ್ಯನ ಇಳಿಜಾರು ಎನ್ನಲಾಗುವುದು. ಅರಿಸ್ಟಾಟಲಿಗೆ ಉಪಮಾನ ರೂಪಕಕ್ಕಿಂತ ಹೆಚ್ಚು ಕಾವ್ಯವಿತ್ತೆಂದು ತೋರಿಬಂತು; ಡಿಮೀಟ್ರಿಯಸನ ಅಭಿಮತ ತದ್ವಿರುದ್ಧ, ಅನ್ಯಾರ್ಥ ಉತ್ಪ್ರೇಕ್ಷೆ ಇತ್ಯಾದಿ ಅಲಂಕಾರಗಳು ಭವ್ಯರೀತಿಗೆ ಹೊಂದುತ್ತವೆ ಎನ್ನುತ್ತಾನೆ. 

	ಭವ್ಯರೀತಿಗೆ ಭಂಗತರುವ ಜಡತೆ ಒಂದು ಬಗೆಯ ಅತಿರೇಕ; ವಿಶೇಷಣ ಬಾಹುಳ್ಯ, ಅತ್ಯಾವೇಶದ ಸಂಯುಕ್ತಪದ, ಅತ್ಯಂತ ಅಪರೂಪವಾದ ಶಬ್ದ, ನಿಸ್ಸತ್ತ್ವ ರೂಪಕ ಮತ್ತು ಛಂದೋವೈಪರೀತ್ಯಗಳಿಂದ ಅದು ಹುಟ್ಟುತ್ತದೆ. ಜಡತೆ ಬಡಾಯಿಯಂತೆ ಒನಕೆಯನ್ನು ಸಿಂಗರಿಸಿದಂತೆ. 

	ನಯ ನಾಜೂಕು ರೀತಿಯ ಪ್ರಸ್ತಾಪ ಕೊಂಚಮಟ್ಟಿಗೆ ಸಂದಿಗ್ಧ. ಅದರ ಬಗೆ ಎರಡು. ಒಂದು ಗಂಭೀರ ಮತ್ತು ಎತ್ತರ; ಇನ್ನೊಂದು ಹಗುರ ಮತ್ತು ಹಾಸ್ಯಮಯ. ನಗುಬರಿಸುವ ಉಕ್ತಿಯ ಲಕ್ಷಣ ಹೇಗೆ ನಯ ನಾಜೂಕಾದೀತು ಎಂಬುದು ಅಷ್ಟು ಸ್ಪಷ್ಟವಾಗಿಲ್ಲ. ಆದರೂ ಪ್ರಾಚೀನ ಗ್ರೀಕ್ ಲೇಖಕರು ಹಾಸ್ಯದ ಮೇಲೆ ಬರೆದಿರುವುದು ಬಲು ಕಡಿಮೆಯಾಗಿರುವುದರಿಂದ ಡಿಮೀಟ್ರಿಯಸನ ಕೆಲವು ವಾಕ್ಯಗಳು ಆದರಣಿಯ : 1 ಚತುರೋಕ್ತಿ ನೀಟಾಗಿರಬಹುದು, ನಿಷ್ಠುರವಾಗಿರಬಹುದು. 2 ಚತುರೋಕ್ತಿ ಪ್ರಸಂಗದ ಕಹಿಕಟುತ್ವವನ್ನು ಹೆಚ್ಚಿಸಬಲ್ಲದು; 3 ಹಾಗೆಯೇ ಅಸಹ್ಯ ಪ್ರಸಂಗವನ್ನು ಹಿತಗೊಳಿಸಬಲ್ಲುದು. ಸಿಟ್ಟುಬರಿಸುವ ಕಡೆ ನಗುಬರಿಸಿದರೆ ಅದು ಉತ್ಕøಷ್ಟ ಚರುತೋಕ್ತಿ. ಶ್ಲೇಷೆ, ಅನ್ಯಾರ್ಥ, ನಾಣ್ಣುಡಿ, ಅತಿಶಯೋಕ್ತಿ ಮೊದಲಾದುವು ಸಹಾಯಕವಾಗುತ್ತವೆ. ಚತುರೋಕ್ತಿಯಿಂದ ಉಕ್ತಿಗಾರನ ಗುಣಶೀಲ ಪ್ರಕಟವಾಗುತ್ತದೆ. 

	ಗಂಭೀರವಾದ ನಯನಾಜೂಕು ಒಳವಿಷಯ, ಶಬ್ದದ ಆಯ್ಕೆ, ಶಬ್ದವಿನ್ಯಾಸ, ಲಯಗಳಿಂದ ಆಗುತ್ತದೆ. ಅದನ್ನು ವಿವರಿಸಲಾಗಿದೆ. 

	ನಯನಾಜೂಕಿನ ವೈರಿ ಸೋಗಿನ ಒಯ್ಯಾರ, ವಿಷಯದ ಲಕ್ಷಣವೇ ಡಬ್ಬಾಗಿರಬಹುದು; ಬಡ ಪದಗಳಿಂದಲೂ ಪದವಿನ್ಯಾಸದಿಂದಲೂ ಶಿಥಿಲ ಲಯದಿಂದಲೂ ಬರಿ ಒಲಪು ಏಳುತ್ತದೆ. 

	ಸರಳರೀತಿಯ ಚರ್ಚೆಗೆ ಡಿಮೀಟ್ರಿಯಸ್ ಬಳಸಿರುವ ಕ್ರಮ ಹೊಸದಾಗಿದೆ. ಸಾಧಾರಣ ವಿಷಯ, ಬಳಕೆಯ ಸಾಮಾನ್ಯ ಶಬ್ದಾವಳಿ ಉಪವಾಕ್ಯಗಳ ಹ್ರಸ್ವತೆ, ಸ್ವರವ್ಯಂಜನಗಳ ಸುಲಭ ಮೈತ್ರಿ, ಪರಿಚಿತ ಅಲಂಕಾರಗಳಿಂದ ಅದು ಉಂಟಾಗುತ್ತದೆಯೆಂದು ಕ್ಷಿಪ್ರವಾಗಿ ಹೇಳಿ ಅದರ ಮೂರು ಗುಣಗಳಿಗೆ ಗಮನ ಕೊಡುತ್ತಾನೆ; ತಿಳಿತನ, ಸ್ಫುಟತ್ವ, ಹರಡಿಕೆ, 32 ಪ್ಯಾರಾಗಳಷ್ಟು ಈ ಭಾಗವಿದ್ದರೂ ವಿಶೇಷ ಬುದ್ಧಿವಂತಿಕೆಯೇನೂ ಅದರಲ್ಲಿ ತೋರಿಬರುವುದಿಲ್ಲ; ಅಲ್ಲದೆ ಹಲವು ಕಡೆ ಅಭಿಪ್ರಾಯ ಸ್ಪಷ್ಟವಾಗಿಲ್ಲ. ಮುಂದಣ 13 ಪ್ಯಾರಾಗಳಲ್ಲಿ ವಿಶದೀಕರಿಸುವ ಕುಶಲಪತ್ರ ಲೇಖನದ ವಿಚಾರ ಉತ್ತಮವಾದದ್ದು. ವಿನೂತನವಾದದ್ದು, ಉಪಯುಕ್ತವಾದದ್ದು. ಪತ್ರಲೇಖನ ಕ್ರಿ.ಪೂ. 5ನೆಯ ಶತಮಾನದಿಂದ ಬಂದಿದ್ದರೂ ಅದರ ವಿಮರ್ಶೆ ಆಗಿರಲಿಲ್ಲ; ಡಿಮೀಟ್ರಿಯಸ್ ಮೊದಲಿಗ. ಅವನಾದ ಮೇಲೆ ಎಷ್ಟೋ ಶತಮಾನಗಳ ತರುವಾಯ ಆ ಪ್ರಸ್ತಾಪ ಬರೆಹಗಾರರ ಚಿತ್ತವನ್ನು ಸೆಳೆಯಿತು. ಅವರಾರ ಬರೆಹವೂ ಡಿಮೀಟ್ರಿಯಸ್ಸನ ಮಟ್ಟಕ್ಕೆ ಹತ್ತುವುದಿಲ್ಲ. ಆರ್ಟಿಮಾನ್ ಎಂಬ ಸಂಪಾದಕನ ಮತದಂತೆ ಕುಶಲಪ್ರತ್ರದ ಶೈಲಿ ಮಾತಾಡುವ ಶೈಲಿಯಾಗಿರತಕ್ಕದ್ದು. ಡಿಮೀಟ್ರಿಯಸ್ ಅದನ್ನು ಅಲ್ಲಗಳೆದು, ಇನ್ನೊಬ್ಬನಿಗೆ ಕೊಡುಗೆಯಂತೆ ಕಳಿಸುವ ಕುಶಲಪತ್ರ ಜಾಗರೂಕತೆಯಿಂದ ರಚಿಸಿದ್ದಾಗಿರಬೇಕು ಎನ್ನುತ್ತಾನೆ. ಕುಶಲಪತ್ರದಲ್ಲಿ ಲೇಖಕ ತನ್ನ ಶೀಲಗುಣ ರೀತಿನೀತಿಯನ್ನು ಹೊರಗೆಡಹುತ್ತಾನೆ; ಆದರೆ ಅದರ ತುಂಬ ಉದ್ದ, ತುಂಬ ಗಂಭೀರವಾದರೆ ಕುಶಲಪತ್ರವಾಗಿ ಉಳಿಯದೆ ಪ್ರಬಂಧವಾಗುತ್ತದೆ. ತರ್ಕ ವಿe್ಞÁನಾದಿಗಳ ಜಿe್ಞÁಸೆ ಅಲ್ಲಿ ಕೂಡದು; ಗಾದೆಗಳನ್ನು ಉಪಯೋಗಿಸಬಹುದು; ಪ್ರೀತಿ ವಿನಯಗಳಿಂದ ಕೂಡಿದ್ದರೆ ಸೊಗಸು; ನಗರಕ್ಕೂ ನಾಡಪ್ರಭುವಿಗೂ ಬರೆಯುವ ಪತ್ರಕ್ಕೆ ಹೆಚ್ಚು ಘನತೆ ಅವಶ್ಯಕವಾದರೂ ಗ್ರಾಂಥಿಕತೆ ಬರಬಾರದು : ಸರಳರೀತಿ ನಾಜೂಕುರೀತಿಗಳ ಹಿತವಾದ ಮಿಶ್ರಣ ಕುಶಲಪತ್ರದ ಶೈಲಿ. 

	ಸರಳರೀತಿ ಕೆಟ್ಟುಹೋದರೆ ಶೈಲಿ ಒಣಕಲಾಗುತ್ತದೆ. ಅಂದಗೇಡು ಆಲೋಚನೆ, ನಿಸ್ಸತ್ತ್ವ ಪದ, ಚಿಕ್ಕ ಪದಗುಚ್ಛಗಳ ಬಾಹುಳ್ಯ. ಥಟ್ಟನೆ ಕೊನೆಗೊಳಿಸುವಿಕೆ-ಇವು ಬಡಕಲಿಗೆ ಕಾರಣ. 

	ಶಕ್ತರೀತಿಗೂ ಭವ್ಯರೀತಿಗೂ ಕೆಲವು ಅಂಶಗಳಲ್ಲಿ ಸಾಮ್ಯ. ಪದಗಳೂ ಅಲಂಕಾರಗಳ ಸಂಖ್ಯೆಯೂ ಉದಾಹರಣೆಗಳೂ ಸಮಾನವಾಗಿರುವುದು ಸಾಧ್ಯ; ಆದರೆ ಉದ್ದೇಶ ಬೇರೆ ಬೇರೆ. ಶಕ್ತರೀತಿಯಲ್ಲಿ ಆವೇಶವೂ ರಭಸವೂ ಅಧಿಕ; ಕ್ಷಿಪ್ರ ಮುಕ್ತಾಯವೂ ಉಂಟು. ಇದಕ್ಕೆ ಡೆಮಾಸ್ತನೀಸ್ ಒಳ್ಳೆಯ ನಿದರ್ಶನ. ಅಡಕವೂ ಬಿಗಿಯೂ ಅಗತ್ಯ; ಕೂಡುವಾಕ್ಯ ಹೆಚ್ಚಾಗಿರಕೂಡದು, ಉಪವಾಕ್ಯಗಳ ಸಂಖ್ಯೆ ಎರಡಕ್ಕಿಂತ ಹೆಚ್ಚಿರಬಾರದು. ವಿರೋಧ ಎದರುಬದುರು ಸಮತೋಲ ಇತ್ಯಾದಿ ಯತ್ನ ಸಾಧ್ಯ ಅಲಂಕಾರಗಳು ಹೊಲ್ಲ; ಕರ್ಕಶತೆ ಅಸಾಂಗತ್ಯ ವಿಸಂಧಿ ಅಕ್ರಮ ಅಭಿನಯ-ಇವುಗಳಿಂದ ಶಕ್ತರೀತಿಗೆ ನೆರವು. ಡಿಮೀಟ್ರಿಯಸ್ ಕೆಲವು ನವೀನ ಅಲಂಕಾರಗಳನ್ನೂ ಸೂಚಿಸುತ್ತಾನೆ. 

	ಒರಟುತನ ಶಕ್ತರೀತಿಯ ಆಭಾಸ. ಅವಾಚ್ಯ ಸಂಗತಿಯ ನಿರೂಪಣೆ, ಛಿದ್ರ ಛಿದ್ರ ಬಂಧ, ಅಶ್ಲೀಲ ಶಬ್ದ -ಮುಂತಾದವು ಒರಟಾಗುತ್ತವೆ. ಅಹಿತವಾಗುತ್ತವೆ. 

	ಡಿಮೀಟ್ರಿಯಸ್ ಪ್ರತಿಭಾವಂತನಲ್ಲದಿದ್ದರೂ ನಿರ್ದುಷ್ಟಪಂಡಿತ, ದಾರ್ಶನಿಕನಲ್ಲದಿದ್ದರೂ ಸಪ್ಪೆ ಅಲಂಕಾರಿಕನಲ್ಲ. ಅವನ ಪುಸ್ತಕ ಆಲಂಕಾರಶಾಸ್ತ್ರಕ್ಕೆ ಸೇರಿದ್ದಾದರೂ ಸಾಹಿತ್ಯ ವಿಮರ್ಶೆಯಿಂದ ನಿಬಿಡವಾಗಿದೆ. ಆಗಿನ ಅವಧಿಯ ವಿಮರ್ಶೆ ಏನನ್ನು ಸಾಧಿಸಬಲ್ಲುದಾಗಿತ್ತು ಎಂಬುದನ್ನು ಅದು ತೆರೆದು ತೋರಿಸುತ್ತದೆ. ಕೆಲವು ಕಡೆ ಪುನರಾವೃತ್ತಿಯಿದೆ; ಹಳೆಯ, ಬಹುಶಃ ಹಳಸು ಉದಾಹರಣೆಗಳನ್ನೇ ಅವನು ಹಿಂಜರಿಯದೆ ಬಳಸುತ್ತಾನೆ. ಪ್ರಾಯಶಃ ಅವನ ವಾದ ಇದು: ಪರಮೋತ್ಕøಷ್ಟ ಉದಾಹರಣೆಯನ್ನು ಹಿಂದಿನವನೊಬ್ಬ ಕಂಡುಹಿಡಿದ ಮೇಲೆ ಅದನ್ನಿಟ್ಟುಕೊಳ್ಳದೆ ಹೊಸ ಅನ್ವೇಷಣೆಯ ಶ್ರಮವೇತಕ್ಕೆ? ಅರಿಸ್ಟಾಟಲನಿಂದ ಬೇರೆ ನಿಲ್ಲುವ ಧೈರ್ಯ ಅವನಿಗೆ ಉಂಟು. ಅತೀವ ಪ್ರಶಂಸೆಗೆ ಸ್ವಾಮಿಯಾಗಿದ್ದ ಡೆಮಾಸ್ತನೀಸನ ಪದಪದ್ಧತಿಯನ್ನು ಟೀಕಿಸುತ್ತಾನೆ. ಡಿಮೀಟ್ರಿಯಸನ ಗ್ರಂಥದಂಥ ಇನ್ನೊಂದು ಗ್ರಂಥ ಮುಂದೆ ಸುಮಾರು ಇನ್ನೂರೈವತ್ತು ವರ್ಷ ಕಾಣಬರಲಿಲ್ಲ. 

	ಅವನ ಹೇಳಿಕೆಗಳಲ್ಲಿ ಹಲವೂ ಸರ್ವಕಾಲದ ಗದ್ಯಕ್ಕೂ ಅನ್ವಯವಾಗಬಲ್ಲವು. ಪದಗಳಿಗೆ ತಮ್ಮದೇ ಆದ ಅಂದಚಂದವಿದೆ; ಮಿತತ್ವದ ಆವಶ್ಯಕತೆ ಅನೇಕ ಸಾರಿ ಪ್ರಬಲ; ಔಚಿತ್ಯ ಅತಿಮುಖ್ಯವಾದದ್ದು; ಎಲ್ಲೆಲ್ಲೂ ಜನಬಳಕೆಯೇ ನಮ್ಮ ಉಪಾಧ್ಯಾಯ-ಇಂಥ ವಾಕ್ಯಗಳು ಶಾಶ್ವತವಾಗಿ ಆದರಣೀಯ.
(ಎಸ್.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ